Goslink

Goslink is providing you latest news, articles, reviews.

Tuesday, 5 January 2021

ನಿರ್ಭಿತ ರಾಜಾಜಿ

  Govt Orders Link       Tuesday, 5 January 2021

                                  


          ನಿರ್ಭಿತ ರಾಜಾಜಿ                                                            

`ರಾಜಾಜಿ' ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದ ಮುತ್ಸದ್ಧಿ ಚಕ್ರವರ್ತಿರಾಜಗೋಪಾಲಚಾರಿಯವರು ಭಾರತದ  ಸ್ವಾತಂತ್ರ್ಯ ಹೋರಾಟದ ಮಹಾನಾಯಕರಲ್ಲಿ ಒಬ್ಬರು. ಅವರು ಶಾಂತಚಿತ್ತತೆ, ಅಸಾಧಾರಣ ಸ್ಥೈರ್ಯ, ಅಚಲ ಸ್ಥಿರತೆ, ಸತ್ಯದ ನಡೆ-ನುಡಿ, ದಕ್ಷ ಆಡಳಿತ ಮತ್ತು ದೂರದೃಷ್ಟಿಗೆ ಹೆಸರಾಗಿದ್ದರು. ಅವರಿಗೆ ಭಯವೆಂಬುದೇ ಇರಲಿಲ್ಲ. ಜೊತೆಗೆ ಪ್ರಚಂಡ ಬುದ್ಧಿವಂತ,  ಮಹಾವಿದ್ವಾಂಸ ಮತ್ತು ಶ್ರೇಷ್ಠ ಸಾಹಿತಿ. ಅವರದು ನೇರ ನಡೆನುಡಿ. ಅದರಿಂದಲೆ ಗಾಂಧೀಜಿ ಅವರನ್ನು `ನನ್ನ ಆತ್ಮಸಾಕ್ಷಿಯ ನಿಯಂತ್ರಣ' ಎಂದು ಕರೆಯುತ್ತಿದ್ದರು. ಅವರ ನಿರ್ಭಿತ ಮತ್ತು ಖಂಡತುಂಡ ಅಭಿಪ್ರಾಯಗಳಿಂದ ಅವರಿಗೆ ``ಮಹಾ ಭಿನ್ನಾಭಿಪ್ರಾಯ'' ಎಂಬ ಹೆಸರೂ ಬಂದಿತ್ತು.

1942ರಲ್ಲಿ ಗಾಂಧೀಜಿ ಚಲೇಜಾವ್ ಚಳವಳಿಗೆ ಕರೆಕೊಟ್ಟರು. ಆ ಸಮಯದಲ್ಲಿ ಜಪಾನಿಯರ ನೌಕಾ ಸೈನ್ಯವು ಬಂಗಾಳಕೊಲ್ಲಿಯನ್ನು ಆಕ್ರಮಿಸಿಕೊಂಡು ಭಾರತದ ಪೂರ್ವತೀರದ ಮೇಲೆ ಇಳಿಯಲು ಸಿದ್ಧವಾಗಿತ್ತು. ಜಪಾನಿಯರ ವಿರುದ್ಧ ಹೋರಾಡದಿರುವ ಇಂಗಿತವನ್ನು ಬ್ರಿಟಿಷ್ ಸರ್ಕಾರ ವ್ಯಕ್ತಪಡಿಸಿತ್ತು. ಇಂತಹ ಸಮಯದಲ್ಲಿ ಬಂದ ಗಾಂಧೀಜಿಯವರ ಚಲೇಜಾವ್ ಚಳವಳಿಯ ಕರೆ ಸರಿಯಲ್ಲವೆಂಬುದು ರಾಜಾಜಿಯವರ ಪ್ರಾಮಾಣಿಕ ಅಭಿಪ್ರಾಯವಾಗಿತ್ತು. ಆದರೆ ಆ ಕಾಲದಲ್ಲಿ ಗಾಂಧೀಜಿಯವರನ್ನು ವಿರೋಧಿಸುವ ಎದೆಗಾರಿಕೆ ಯಾರಿಗೂ ಇರಲಿಲ್ಲ. ರಾಜಾಜಿಯವರೂ ಸಹ ತಮ್ಮ ಆತ್ಮಸಾಕ್ಷಿಯನ್ನು ಬದಿಗೊತ್ತಿ, ಚಲೇಜಾವ್ ಚಳವಳಿಯನ್ನು ಬೆಂಬಲಿಸಿ ಆರಾಮವಾಗಿ ಇರಬಹುದಾಗಿತ್ತು. ಆದರೆ ರಾಜಾಜಿ ನಿಷ್ಠುರ ಸತ್ಯವಾದಿ. ಅವರು ಚಲೇಜಾವ್ ಚಳವಳಿಯನ್ನು ಏಕಾಂಗಿಯಾಗಿ ವಿರೋಧಿಸಿದರು. ಅದರಿಂದ ಅವರು ಬಹಳ ವಿರೋಧವನ್ನು ಎದುರಿಸಬೇಕಾಯಿತು. ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳಬೇಕಾಯಿತು. ಅವರು ಯಾವ ತ್ಯಾಗಕ್ಕೆ ಬೇಕಾದರೂ ಸಿದ್ಧರಾಗಿದ್ದರೇ ಹೊರತು, ತಮ್ಮ ಮನಃಸಾಕ್ಷಿಗೆ ವಿರುದ್ಧವಾಗಿ ನಡೆಯಲು ಸಿದ್ಧರಿರಲಿಲ್ಲ.

1942ರ ಜುಲೈ ಎರಡನೆ ವಾರದಲ್ಲಿ ವಾರ್ಧಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಚಲೇಜಾವ್ ಠರಾವನ್ನು ಅಂಗೀಕರಿಸಿತು. ಅದಕ್ಕೆ ಪ್ರತಿಕ್ರಿಯೆಯಾಗಿ ರಾಜಾಜಿಯವರು ಮದ್ರಾಸಿನ ಶಾಸನ ಸಭೆಯ ತಮ್ಮ ಸದಸ್ಯತ್ವಕ್ಕೆ ಹಾಗೂ ಭಾರತ  ರಾಷ್ಟ್ರೀಯ ಕಾಂಗ್ರೆಸ್ಸಿನ್ಸ  ಪ್ರಾಥಮಿಕ ಸದಸ್ಯತ್ವಕ್ಕೆರಾಜಿನಾಮೆ ನೀಡಿದರು. ಆಗಸ್ಟ್ 7 ಮತ್ತು 8ರಂದು ಕಾಂಗ್ರೆಸ್ಸಿನ ಮಹಾ ಅಧಿವೇಶನ  ಬಾಯಿಯಲ್ಲಿ ಏರ್ಪಾಡಾಗಿತ್ತು. ಆ ಅಧಿವೇಶನದಲ್ಲಿ ಚಲೇಜಾವ್ ಚಳವಳಿಯ ಠರಾವು ಅಂಗೀಕಾರವಾಗುವುದರಲ್ಲಿತ್ತು.

 ತಮ್ಮ ಅಭಿಪ್ರಾಯವನ್ನು ಜನತೆಯ ಮುಂದಿಡಲು ರಾಜಾಜಿಯವರೂ ಸಹ ಆ ಸಮಯಕ್ಕೆ ಬೊಂಬಾಯಿಗೆ ಬಂದರು. ಆಗಸ್ಟ್ 5 ರಂದು ಮಾತುಂಗದ ನಾಪೂ ಸಭಾಂಗಣದಲ್ಲಿ ಅವರ ಭಾಷಣ ಏರ್ಪಾಡಾಗಿತ್ತು. ಅಂದು ಅವರು ಸಭಾಂಗಣಕ್ಕೆ ಬರುವ ವೇಳೆಗೆ ಸಭಾಂಗಣವು ಜನರಿಂದ ಕಿಕ್ಕಿರಿದಿತ್ತು. ಅವರು ಮಾತನಾಡಲು ಅವಕಾಶ ಕೊಡಬಾರದೆಂದು ಗುಂಪೂ ಅಲ್ಲಿ ಜಮಾಯಿಸಿತ್ತು. ರಾಜಾಜಿಯವರು ದ್ವಾರಕ್ಕೆ ಬಂದಾಗ ಅವರ ವಿರುದ್ಧದ ಘೋಷಣೆಗಳು ಮೊಳಗಿದುವು. ಆದರೆ ಇದಾವಕ್ಕೂ ಗಮನ ಕೊಡದೆ ಅವರು ಸ್ಥಿತಪ್ರಜ್ಞನಶಾಂತಭಾವದಿಂದ ವೇದಿಕೆಗೆ ಗಂಭೀರವಾಗಿ ನಡೆದರು.

ಆಗ ಇದ್ದಕ್ಕಿದ್ದಹಾಗೆ ಒಬ್ಬ ಯುವಕ ಟಾರು ತುಂಬಿದ ಕಾಗದದ ಚೆಂಡನ್ನು ಅವರ ಮೇಲೆ ಗುರಿಯಿಟ್ಟು ಎಸೆದರು. ಅದು ಅವರ ಹಣೆಗೆ ಬಡಿದು ಒಡೆಯಿತು. ಅವರ ಮುಖ ಟಾರಿನಿಂದ ಲೇಪಿತವಾಯಿತು. ಟಾರು ಅವರು ಧರಿಸಿದ್ದ ಶುಭ್ರಬಿಳಿಯಬಟ್ಟೆಗೂ ಇಳಿಯಿತು. `ರಾಜಾಜಿ ಹಿಂತಿರುಗಿ',  `ರಾಜಾಜಿ  ಮೊರ್ದಾಬಾದ್', `ಕ್ವಿಟ್ ಇಂಡಿಯ ಜಿಂದಾಬಾದ್' ಮುಂತಾದ ಘೋಷಣೆಗಳು ಗಂಟಲು ಹರಿಯುವಂತೆ ಕೂಗಲ್ಪಟ್ಟವು. ರಾಜಾಜಿಯವರು ಇದಾವುದಕ್ಕೂ ಹೆದರಲೂ ಇಲ್ಲ, ಹಿಂತಿರುಗಲೂ ಇಲ್ಲ, ತಮ್ಮ ಮುಖದ ಮೇಲಿನ ಟಾರನ್ನು ಒರಿಸಿಕೊಳ್ಳಲೂ ಇಲ್ಲ. ಸೀದಾ ಹೋಗಿ, ವೇದಿಕೆಯನ್ನು ಹತ್ತಿ ಧ್ವನಿವರ್ಧಕದ ಮುಂದೆ ಶಾಂತಭಾವದಿಂದ ನಿಂತರು. ಅರ್ಧಘಂಟೆಯ ನಂತರ ಬಹುಶಃ ಘೋಷಣಕಾರರು ಸುಸ್ತಾದ ನಂತರ, ಕೂಗಾಟ ಕಿರುಚಾಟ ಅರಚಾಟ ನಿಂತಿತು. ಅನಂತರ ರಾಜಾಜಿಯವರು ನಿಧಾನಗತಿಯಲ್ಲಿ ಗಂಭೀರವಾಣಿಯಲ್ಲಿ ತಮ್ಮ ಭಾಷಣವನ್ನು ಆರಂಭಿಸಿದರು.

ಅವರೆಂದರು , ``ಸ್ನೇಹಿತರೆ , ಎಲ್ಲಕ್ಕೂ ಮೊದಲು ಟಾರಿನ ಚೆಂಡನ್ನು ನನ್ನ ಮೇಲೆ ಸರಿಯಾದ ಗುರಿಯಿಟ್ಟು ಎಸೆದ ಆ ಯುವಕನನ್ನು ಅಭಿನಂದಿಸಲು ಬಯಸುತ್ತೇನೆ. ಅವನು ನನ್ನ ಅಭಿಪ್ರಾಯಗಳ ವಿರೋಧಕ. ತನ್ನ ಮನಸ್ಸಿನ ನಂಬಿಕೆಯನ್ನು ತೋರ್ಪಡಿಸಲು ಧೈರ್ಯದಿಂದ ಈ ಕೆಲಸ ಮಾಡಿದ್ದಾನೆ. ಇಂದು ಇಂತಹ ದೃಢ ನಿರ್ಧಾರದ ಅಚಲರಾದ ಧೈರ್ಯಶಾಲಿಗಳಾದ `ಯುವಕರು' ನಮ್ಮ ದೇಶಕ್ಕೆ ಬೇಕಾಗಿದ್ದಾರೆ. ಆಗ ಮಾತ್ರ ನಾವು ಜಪಾನಿಯರನ್ನು ಯಶಸ್ವಿಯಾಗಿ ಎದುರಿಸಿ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬಹುದು.'' ತಕ್ಷಣ ಸಭಿಕರ ಮನೋಭಾವವೇ ಬದಲಾವಣೆಯಾಯಿತು. ವಿರೋಧಿಗಳು ಮೆಚ್ಚಿಗೆಗಾರರಾಗಿ ಪರಿವರ್ತಿತರಾದರು. ರಾಜಾಜಿಯವರ ಭಾಷಣವನ್ನು ನಿಶ್ಶಬ್ದವಾಗಿ ಕೊನೆಯವರೆಗೂ ಆಲಿಸಿದರು.  

logoblog

Thanks for reading ನಿರ್ಭಿತ ರಾಜಾಜಿ

Previous
« Prev Post

No comments:

Post a comment