Goslink

Goslink is providing you latest news, articles, reviews.

Wednesday, 27 January 2021

ಶಾಲೆಗಳಲ್ಲಿ ಯಶಸ್ವಿ ಪೋಷಕರ ಸಭೆ ನಡೆಸುವ ಔಚಿತ್ಯ

  Govt Orders Link       Wednesday, 27 January 2021

 ಶಾಲೆಗಳಲ್ಲಿ ಯಶಸ್ವಿ ಪೋಷಕರ ಸಭೆ ನಡೆಸುವ ಔಚಿತ್ಯ

-ಎಲ್. ಜಯಪ್ಪ, ಮುಖ್ಯೋಪಾಧ್ಯಾಯರು

 ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಶಾಲೆ, ಶಿಕ್ಷಕ ಮತ್ತು ಪೋಷಕರು ಮಹತ್ವದ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಶಿಕ್ಷಣಕ್ಕೆ ತನ್ನದೇ ಆದ ಪ್ರಮುಖ ಸ್ಥಾನವಿದೆ. ಇಂತಹ ಶಿಕ್ಷಣವನ್ನು ನೀಡುವಲ್ಲಿ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ಅನುದಾನರಹಿತ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇಂದು ಸರ್ಕಾರಿ ಶಾಲೆಗಳು ಸಬಲೀಕರಣಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಯಶಸ್ವಿ ಪೋಷಕರ ಸಭೆಗಳನ್ನು ಆಯೋಜಿಸುವ ಅಗತ್ಯವಿದೆ.

 ಸರ್ಕಾರದ ಮಾರ್ಗಸೂಚಿಯಂತೆ ಪ್ರತಿವರ್ಷವೂ ನಾವು ಎರಡು ಬಾರಿ ಪೋಷಕರ ಸಭೆ ನಡೆಸಬೇಕು ಮೊದಲನೆಯದು ಜುಲೈ- ಆಗಸ್ಟ್ ಮಾಹೆಯಲ್ಲಿ. ಸಭೆ ನಡೆಸಬೇಕಾದ ಪೂರ್ವದಲ್ಲಿ ಸಾಕಷ್ಟು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಬೇಕು ಈ ಬಗ್ಗೆ ಪೋಷಕರಿಗೆ ಒಂದು ವಾರ ಮೊದಲೇ ಜ್ಞಾಪನವನ್ನು ಕಳುಹಿಸಬೇಕು. ಪೋಷಕರೆಲ್ಲಾ ರೈತ ಸಮುದಾಯದವರಾಗಿದ್ದರೆ ಸೋಮವಾರ ಕರೆಯುವುದು ಸೂಕ್ತ. ಈ ವೇಳೆಗೆ ಮೊದಲ ಕಿರುಪರೀಕ್ಷೆಗಳನ್ನು ನಡೆಸಿ ಮೌಲ್ಯಮಾಪನ ಮಾಡಿ ಪೋಷಕರ ಗಮನಕ್ಕೆ ಉತ್ತರ ಪತ್ರಿಕೆಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಮೊದಲೇ ಎಸ್.ಡಿ.ಎಂ.ಸಿ ಮತ್ತು ಶಿಕ್ಷಕ ಸಿಬ್ಬಂದಿಯೊಂದಿಗೆ ಚರ್ಚಿಸಿ ದಿನಾಂಕ ಗೊತ್ತುಪಡಿಸಿಕೊಂಡರೆ ಸೂಕ್ತ. ಇಂತಹ ಸಭೆಗಳಿಗೆ ಪೋಷಕರಿಗೆ ಸೂಕ್ತ ಕೌನ್ಸಲಿಂಗ್ ಮಾಡಲು ಶೈಕ್ಷಣಿಕವಾಗಿ ಅನುಭವವಿರುವ ಹಿರಿಯ ಅಧಿಕಾರಿಗಳನ್ನು, ಶೈಕ್ಷಣಿಕ ಅನುಭವಿಗಳು ಅಥವಾ ಜನಪ್ರತಿನಿಧಿಗಳನ್ನು ಆಮಂತ್ರಿಸುವುದು ಒಳ್ಳೆಯದು. ಪೋಷಕರ ಸಭೆ ಪರಿಣಾಮಕಾರಿಯಾಗಿ ನಡೆಸಲು ದಿವಸವನ್ನು ಎರಡು ಭಾಗಗಳನ್ನಾಗಿ ಮಾಡಿಕೊಳ್ಳುವುದು ಸೂಕ್ತ. ಪೂರ್ವಾಹ್ನದ ಅವಧಿಯನ್ನು ಸಾಮಾನ್ಯ ಸಭೆಗಾಗಿ 10.30ಕ್ಕೆ ಉದ್ಘಾಟನೆ, ಪೋಷಕರ ಪ್ರಾಸ್ತಾವಿಕವಾಗಿ ಸಭೆಯ ಔಚಿತ್ಯತೆಯ ಬಗ್ಗೆ ನುಡಿ, ನಂತರ ಶೈಕ್ಷಣಿಕ ತಜ್ಞರಿಂದ ಪೋಷಕರಿಗೆ ಪೋಷಕರ ಜವಾಬ್ದಾರಿಗಳ ಬಗ್ಗೆ ಪೋಷಕರು ಮಕ್ಕಳೊಂದಿಗೆ ನಡೆದುಕೊಳ್ಳುವುದರ ಬಗ್ಗೆ ಉತ್ತಮ ಉಪನ್ಯಾಸ ಮಾಡಿಸಬೇಕು. ನಂತರ ಇಲಾಖೆಯಿಂದ ಆಗಮಿಸಿದ ಅಧಿಕಾರಿಗಳಿಂದ ಪೋಷಕರಿಗೆ ಇಲಾಖೆಯಿಂದ ಮಕ್ಕಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದು. ಮುಖ್ಯಶಿಕ್ಷಕರು ಶಾಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಅದಕ್ಕೆ ಪೋಷಕರು ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಡಬೇಕು.

 ನಂತರ ಬಂದಂತಹ ಪೋಷಕರಿಗೆ ಲಘು ಉಪಹಾರ ವ್ಯವಸ್ಥೆಮಾಡಿ ಮಧ್ಯಾಹ್ನದ ಉಪಹಾರ ಕೊಡಿಸಬೇಕು. ಅಪರಾಹ್ನ ಒಂದೊಂದು ತರಗತಿಯ ವಿಭಾಗಕ್ಕೆ ಇಬ್ಬರು ಶಿಕ್ಷಕರನ್ನು ನಿಯೋಜಿಸಿ ಮೊದಲೇ ಸಿದ್ಧಪಡಿಸಿಕೊಂಡ, ವಿದ್ಯಾರ್ಥಿ ಫೈಲನ್ನು ಇಟ್ಟುಕೊಂಡು ಶಿಕ್ಷಕ-ಪೋಷಕರು-ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿ ಪ್ರಗತಿ ಪರಿಶೀಲನೆ ಮಾಡಬೇಕು. ಕಡಿಮೆ ಸಾಮಥ್ರ್ಯ ಗಳಿಸಿದ್ದಲ್ಲಿ ಸಕಾರತ್ಮಕವಾಗಿ ವಿದ್ಯಾರ್ಥಿಗೆ ಓದಲು ಇರುವ ಅಡ್ಡಿ-ಆತಂಕಗಳ ಬಗ್ಗೆ ಪೋಷಕರ ಸಮ್ಮುಖದಲ್ಲಿ ಚರ್ಚಿಸಿ ವಿದ್ಯಾರ್ಥಿಯಿಂದ ತಪ್ಪುಗಳಾಗಿದ್ದಲ್ಲಿ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಬೇಕು. ಪೋಷಕರಿಂದ ತಪ್ಪುಗಳಾಗಿದ್ದಲ್ಲಿ ಪೋಷಕರಿಗೆ ಮಾರ್ಗದರ್ಶನ ನೀಡಬೇಕು. ಈ ಪ್ರಕ್ರಿಯೆ ನಡೆಸಲು ಪ್ರತಿ ವಿದ್ಯಾರ್ಥಿಗೆ ಎರಡರಿಂದ ಮೂರು ನಿಮಿಷಗಳು ಸಾಕು. ಹೆಚ್ಚಾಗಿ ಕಲಿಕೆಯಲ್ಲಿ ಹಿಂದುಳಿದ ಮತ್ತು ವಿಶೇಷ ಸಮಸ್ಯೆಗಳಿದ್ದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಇಂತಹ ಪೋಷಕರ ಸಭೆಯ ಆಯೋಜನೆಯಿಂದ ಆಗುತ್ತಿರುವ

1. ಪೋಷಕರು ಶಾಲೆಯ ಬಗ್ಗೆ ಗೌರವ ಭಾವನೆ ಬೆಳೆಸಿಕೊಂಡು ಶಾಲೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ನಮ್ಮ ಕರ್ತವ್ಯ ಎಂದು ಹಂತಹಂತವಾಗಿ ತಿಳಿದುಕೊಂಡು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

2. ಪೋಷಕರ ಸಭೆಯಲ್ಲಿ ತಜ್ಞರಿಂದ ಪೋಷಕರ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡುವುದರಿಂದ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.

3. ಇಂತಹ ಕಾರ್ಯಕ್ರಮದಲ್ಲಿ ಶಾಲೆಗಾಗಿ ನಾವು-ನೀವು, ಶಾಲಾ ದತ್ತುಯೋಜನೆಯನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಶಾಲೆಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲಾಗಿದೆ.

4. ಇಂತಹ ಕಾರ್ಯಕ್ರಮದಿಂದ ಎಸ್.ಡಿ.ಎಂ.ಸಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತವೆ.

5. ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳ್ಳಲು ಸಹಾಯವಾಗಿದೆ.

6. ಇಂತಹ ಪರಿಣಾಮಕಾರಿ ಸಭೆಗಳನ್ನು ನಡೆಸುವುದರಿಂದ ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸುವುದರ ಜೊತೆಗೆ ಸರ್ಕಾರಿ ಶಾಲೆಗಳ ಬಗ್ಗೆ ಇರುವ ತಾತ್ಸಾರ, ಉಪೇಕ್ಷೆಯ ಭಾವನೆಗಳನ್ನು ಹೋಗಲಾಡಿಸಬಹುದು.

8. ಸಭೆಗಳಲ್ಲಿ ಪೋಷಕರು ತಪ್ಪದೆ ಭಾಗವಹಿಸುವುದರಿಂದ ಅವರ ನಿರೀಕ್ಷೆಗಳನ್ನು ತಿಳಿದುಕೊಂಡು ಅನುಷ್ಠಾನಗೊಳಿಸಲು ಸಹಾಯಕವಾಗುತ್ತಿದೆ.

9. ಸಭೆಗಳಿಂದ ಪೋಷಕ-ಶಿಕ್ಷಕ-ಶಾಲೆ ಮಧ್ಯೆ ಅವಿನಾಭಾವ ಸಂಬಂಧ ಏರ್ಪಡಲು ಸಾಧ್ಯವಾಗುತ್ತಿದೆ.

10. ಪ್ರತಿ ವಿದ್ಯಾರ್ಥಿಯ ಪ್ರಗತಿಯನ್ನು ಪ್ರತ್ಯೇಕವಾಗಿ ಕಡತ ರೂಪದಲ್ಲಿ ನೀಡುವುದರಿಂದ ಪೋಷಕರಿಗೆ ಅವರ ಮಕ್ಕಳ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಪರಿಶೀಲನೆಗೆ ಸುಲಭವಾಗುತ್ತದೆ ಹಾಗೂ ಈ ವಿಧಾನವನ್ನು ಪೋಷಕರು ಉತ್ತಮವಾಗಿ ಸ್ವೀಕರಿಸುತ್ತಿದ್ದಾರೆ.

11. ಸಭೆಗಳಲ್ಲಿ ಎಸ್.ಎಸ್.ಎಲ್.ಸಿ., ಎನ್.ಟಿ.ಎಸ್.ಈ / ಎನ್. ಎಂ.ಎಂ.ಎಸ್. ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸುವುದರಿಂದ ಪೋಷಕರು ಪ್ರೇರಣೆಗೊಂಡು ತಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸಲು ಸಹಾಯಕವಾಗುತ್ತಿದೆ.

12.ಸಭೆಯಿಂದ ಶಿಕ್ಷಕರಿಗೂ ಸಹ ಪೋಷಕರ ಮನೋಭಾವನೆ ಅವರ ನಡವಳಿಕೆಗಳನ್ನು ಅರ್ಥಮಾಡಿಕೊಂಡು ಸೂಕ್ತ ಮಾರ್ಗದರ್ಶನ ಮಾಡಲು ಸಹಾಯಕವಗುತ್ತದೆ. ಈ ರೀತಿಯ ಪೋಷಕರ ಸಭೆಯನ್ನು ನಮ್ಮ ಶಾಲೆಯಲ್ಲಿ ನಾವು ಕಳೆದ 6 ವರ್ಷಗಳಿಂದ ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಇದೊಂದು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಕಾರ್ಯವಾಗಿದ್ದು ನಿಲಕ್ಷ್ಯ ಮಾಡಬಾರದು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಬೇಕಾದಲ್ಲಿ ಉತ್ತಮ ಪೋಷಕರ ಸಭೆ ನಡೆಸುವುದು ಅನಿವಾರ್ಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪೋಷಕರು ಬರುವುದಿಲ್ಲ ಎಂಬ ಸಬೂಬಿದೆ ಆದರೆ ಇದು ತಪ್ಪು ಕಲ್ಪನೆ. ನಮ್ಮ ಪ್ರಯತ್ನ ಸರಿಯಾಗಿದ್ದಲ್ಲಿ ಉತ್ತಮ ಫಲ ಸಿಗುತ್ತದೆ. ಉದಾಹರಣೆಗೆ ನಮ್ಮ ಶಾಲೆಯ ಸಭೆಗೆ ಶೇ. 90 ರಿಂದ 95 ರಷ್ಟು ಪೋಷಕರು ಹಾಜರಾಗುತ್ತಾರೆ. 352 ಪೋಷಕರಲ್ಲಿ 325-330 ಪೋಷಕರು ಹಾಜರಿರುತ್ತಾರೆ. ಇಂತಹ ಸಭೆಗಳನ್ನು ನಾವು ವರ್ಷದ ಮೊದಲಲ್ಲಿ ಮತ್ತು ಅರ್ಧವರ್ಷದ ನಂತರ ಮತ್ತು ಸಮುದಾಯದತ್ತ ಶಾಲೆಗಳ ಕಾರ್ಯಕ್ರಮದಲ್ಲಿ ಮಾಡಬಹುದು. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮತ್ತು ಶಾಲೆಯ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಹೇಳಬಹುದಾಗಿದೆ. ಆದ್ದ- ರಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಪರಿಣಾಮಕಾರಿ ಪೋಷಕರ ಸಭೆಗಳನ್ನು ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಯವರೊಂದಿಗೆ ಸೇರಿ ಪೋಷಕರ ಸಭೆಗಳನ್ನು ನಡೆಸಿ ಶೈಕ್ಷಣಿಕ ಪ್ರಗತಿಯತ್ತ ಮುನ್ನಡೆಯೋಣ. 

logoblog

Thanks for reading ಶಾಲೆಗಳಲ್ಲಿ ಯಶಸ್ವಿ ಪೋಷಕರ ಸಭೆ ನಡೆಸುವ ಔಚಿತ್ಯ

Previous
« Prev Post

No comments:

Post a comment