Goslink

Goslink is providing you latest news, articles, reviews.

Friday, 25 December 2020

ಹೇಗೆ ರೂಢಿಸಿಕೊಂಡೇವು ಮೌಲ್ಯ

  Govt Orders Link       Friday, 25 December 2020

                                      


              ಹೇಗೆ ರೂಢಿಸಿಕೊಂಡೇವು ಮೌಲ್ಯ

                                                                                                                     -ಅರವಿಂದ ಚೊಕ್ಕಾಡಿ

6. ಸಂದರ್ಶನ: ಸ್ಥಳ, ವ್ಯಕ್ತಿ, ಘಟನೆಗಳ ಸಂದರ್ಶನದಿಂದ ಮೌಲ್ಯಗಳು ರೂಢಿಯಾಗಲು ಸಾಧ್ಯವಿದೆ. ಈ ವಿಚಾರದಲ್ಲಿ ಶಿಕ್ಷಕರಿಗಿಂತ ಹೆಚ್ಚು ಅವಕಾಶವಿರುವುದು ಪಾಲಕರಿಗೆ. ದುರ್ಬಲರ ರಕ್ಷಣೆಯನ್ನು ಮಗು ಮೌಲ್ಯವಾಗಿ ರೂಢಿಸಿಕೊಳ್ಳಬೇಕಾದರೆ ದುರ್ಬಲರ ಸ್ಥಿತಿಗತಿಗಳಿಗೆ ಅವರ ಹೃದಯ ಆದ್ರ್ರವಾಗಬೇಕು. ಗುಡಿಸಲುಗಳಲ್ಲಿ, ಡೇರೆಗಳಲ್ಲಿ ವಾಸಿಸುವ ಜನರ ಬಳಿಗೆ ಮಗುವನ್ನು ಕರೆದೊಯ್ದು ಅವರ ಒಡನಾಟಕ್ಕೆ ಅವಕಾಶ ಕೊಡಬೇಕು. ಜೀವನಶೈಲಿಯನ್ನು ಪರಿಚಯಿಸಬೇಕು. ಕೇವಲ ತಿಳಿವಳಿಕೆ ಬುದ್ಧಿಯಲ್ಲಿ ಉಳಿದುಕೊಳ್ಳುತ್ತದೆಯೇ ಹೊರತು ಕ್ರಿಯಾಸ್ವರೂಪ ತಾಳುವ ಸಾಧ್ಯತೆಗಳು ಕಡಿಮೆ. ಆದರೆ ನೇರ ಒಡನಾಟ, ಸಂದರ್ಶನದಿಂದ ತಿಳಿವಳಿಕೆಯು ಮಗುವಿನ ಅನುಭವವಾಗಿ ಬರುತ್ತದೆ. ಅದು ಹೆಚ್ಚು ಕ್ರಿಯಾತ್ಮಕ ಚಟುವಟಿಕೆಗೆ ಅನುವು ಮಾಡಿಕೊಡುತ್ತದೆ. ಪುರಸಭೆ, ವಿಧಾನಸಭೆ, ಮತಗಟ್ಟೆ, ನ್ಯಾಯಾಲಯ ಕಲಾಪಗಳನ್ನು ಸಂದರ್ಶಿಸುವುದರಿಂದ ವಾಸ್ತವಿಕ ಪ್ರಯೋಜನಗಳು ಜಾಸ್ತಿ; ಮೌಲ್ಯಗಳು ಪರಿಣಾಮಕಾರಿಯಾಗಿ ಮೈಗೂಡುವ ಅವಕಾಶ ಹೆಚ್ಚು ಆದರೆ ಎಚ್ಚರಿಕೆ, ಮಗುವಿನ ಧಾರಣಾಶಕ್ತಿಗಿಂತ ಹೆಚ್ಚು ಒತ್ತಡ ಉಂಟುಮಾಡುವ ಸನ್ನಿವೇಶ- ಘಟನೆಗಳನ್ನು ಮಗುವಿಗೆ ತೋರಿಸದಿರಿ. ನೋವಿನಲ್ಲಿರುವವರನ್ನು ಪರಿಚಯಿಸಬೇಕೆಂದು ಎಳೆಯ ಮಗುವನ್ನು ವಿಕಾರವಾಗಿ ನರಳುತ್ತಿರುವವನ ಬಳಿಗೆ ಕರೆದೊಯ್ದರೆ ಮಗು ಹೆದರಿಕೊಂಡೀತು. ಅದರಿಂದ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು. ಇಂಥ ಸೂಕ್ಷ್ಮಗಳನ್ನು ಗ್ರಹಿಸಲು ಕಷ್ಟವಾಗುವುದಾದರೆ ಸಂದರ್ಶನವನ್ನು ಎತ್ತಿ ಆಚೆಗಿಟ್ಟುಬಿಡಿ. ಬೇರೆ ನೆಲೆಗಳಿಂದ ಸಾಧ್ಯವಾಗುವ ಮೌಲ್ಯಗಳನ್ನು ರೂಢಿಗೊಳಿಸಿದರೆ ಸಾಕು. ಮುಂದೆ ಮಗು ಬೆಳೆದಾಗ ವಾಸ್ತವಕ್ಕೆ ಮುಖಾಮುಖಿಯಾಗುವ ಹೊತ್ತು ರೂಢಿಗತ ಮೌಲ್ಯವನ್ನು ಬಳಸಿಕೊಂಡು ಮೌಲ್ಯಯುತವಾಗಿ ಪ್ರತಿಕ್ರಿಯಿಸುತ್ತದೆ. ಚಿಂತೆಬೇಡ. 

7. ದೃಕ್ - ಶ್ರವಣ ಮಾಧ್ಯಮದ ಉಪಯೋಗ
ಜೀವಂತ ನೆಲೆಯಿಂದ ದೊರಕುವ ಮೌಲ್ಯಪ್ರಜ್ಞೆ ಸಶಕ್ತವಾಗಿ ರೂಢಿಯಾಗುವುದಾದರೂ ಹಾಗೆ ರೂಢಿಯಾದ ಮೌಲ್ಯವನ್ನು ಬಲಪಡಿಸುವ ಕೆಲಸವನ್ನು ದೃಕ್-ಶ್ರವಣ ಮಾಧ್ಯಮಗಳು ಮಾಡಬಲ್ಲವು. ಪುಸ್ತಕ, ಪ್ರೊಜೆಕ್ಟರ್, ಸಿನೆಮಾ, ಟಿವಿ, ರೇಡಿಯೋ, ಸಂಗೀತದ ರಾಗಗಳು, ನಾಟಕ ನೃತ್ಯ ಮುಂತಾದವುಗಳ ಮೂಲಕ ಮೌಲ್ಯವನ್ನು ರೂಢಿಸಿಕೊಳ್ಳಲು ಸಹಾಯ ಮಾಡಬಹುದು. ಆದರೆ ಆಧುನಿಕ ಧೃಕ್-ಶ್ರವಣ ಮಾಧ್ಯಮಗಳನ್ನು ಬಳಸಿಕೊಳ್ಳುವಾಗ ಮೌಲ್ಯವನ್ನು ರೂಢಿಗೊಳಿಸಿಕೊಳ್ಳಲು ಸಹಾಯ ಮಾಡುವವರು ತುಂಬಾ ಸೂಕ್ಷ್ಮಜ್ಞರಾಗಿರಬೇಕಾಗುತ್ತದೆ. ಕೊಂಚ ಎಡವಟ್ಟು ಕೂಡ ನೇತ್ಯಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. 

8. ಗ್ರಂಥಾಲಯ :
ಪಾಲಕರೇ, ಶಿಕ್ಷಕರೇ ಪ್ಲೀಸ್ ನಿಮ್ಮ ಮಕ್ಕಳು ತೀರಾ ಪುಟ್ಟದಾದರೂ ಒಂದು ಗ್ರಂಥಾಲಯ ಮಾಡಿಕೊಳ್ಳುವಂತೆ ನೋಡಿಕೊಳ್ಳಿ. ಬೇರೆ ಯಾವ ನೆಲೆಯಿಂದ ಮೌಲ್ಯಗಳು ರೂಢಿಯಾಗದೆ ಹೋದರೂ ಒಂದು ಒಳ್ಳೆಯ ಪುಸ್ತಕದ ಓದು ಮೌಲ್ಯಗಳ ಅದ್ಭುತ ಜಗತ್ತನ್ನು ನಿಮ್ಮ ಮಗುವಿನಲ್ಲಿ ರೂಢಿಸಿಬಿಡುತ್ತದೆ. ಈ ಕೃತಿಯ ಲೇಖಕ 12-13 ವರ್ಷದವನಿದ್ದಾಗ ಬಿ.ವಿ. ಕಕ್ಕಿಲ್ಲಾಯರ ಕೃತಿಯೊಂದನ್ನು ಅಕಸ್ಮಾತ್ ಓದುವ ಪ್ರಸಂಗ ಬಂತು. ಅದು ರೂಢಿಸಿದ 'ಸಮಾಜಕ್ಕೆ ಸಾಕ್ಷಿ ಪ್ರಜ್ಞೆಯಾಗಬೇಕು' ಎಂಬ ಮೌಲ್ಯವನ್ನು ಇದು ತನಕ ನಾಶಪಡಿಸಲು ಯಾವ ಶಕ್ತಿಗೂ ಸಾಧ್ಯವಾಗಿಲ್ಲ. ಪುಸ್ತಕವೊಂದರ ಅದ್ಭುತ ಶಕ್ತಿಯನ್ನು ಮನಗಾಣಿಸುವುದಕ್ಕಾಗಿ ಈ ಸಂಗತಿಯನ್ನು ಪ್ರಸ್ತಾಪಿಸಬೇಕಾಯಿತು. ಒಂದು ಒಳ್ಳೆಯ ಪುಸ್ತಕ ಏನೂ ಅಲ್ಲದವನನ್ನು ಏನೇನೋ ಆಗಿ ಬೆಳೆಸಬಲ್ಲದು. ಬದುಕಿಗೆ ಮಹತ್ತರ ತಿರುವು ಚೈತನ್ಯ, ಆತ್ಮಸ್ಥೈರ್ಯ, ಪ್ರೀತಿ, ಸಹನೆ, ಸಂಸ್ಕಾರಗಳನ್ನೆಲ್ಲ ಕೊಡುವ ಶಕ್ತಿ ಪುಸ್ತಕಗಳಿದೆ. ಇದರರ್ಥ ಪುಟ್ಟಮಕ್ಕಳು ಶೇಕ್ಸ್ಪಿಯರ್, ಕೀಟ್ಸ್, ಪ್ರೇಂಚಂದ್, ಕುಮಾರವ್ಯಾಸ, ಪಂಪ, ಅಮತ್ರ್ಯಸೇನ್, ಕುವೆಂಪುರಂಥವರ ಕೃತಿಗಳನ್ನೆಲ್ಲ ಓದೀತು, ಓದಬೇಕು ಎಂಬುದಲ್ಲ, ಮಗು ಬಾಲಮಂಗಳವನ್ನು ಓದಲಿ. 'ಚಂದಮಾಮ', 'ಬೊಂಬೆಮನೆ' 'ಅಮರಚಿತ್ರಕತೆ'ಗಳನ್ನು ಓದಲಿ. ಇವತ್ತು 'ಚಂದಮಾಮ'ವನ್ನು ತುಂಬ ಪ್ರೀತಿಯಿಂದ ಮಗು ಓದಬಲ್ಲುದಾದರೆ ಇಂದಲ್ಲ ನಾಳೆ ಆ ಮಗು ಶೇಕ್ಸ್ಪಿಯರ್ ಅನ್ನು ಕೂಡ ಓದುತ್ತದೆ. ನಾವು ನಮ್ಮ ಮಕ್ಕಳಿಗೆ ಕೊಡಬಹುದಾದ ಅತಿದೊಡ್ಡ ಉಡುಗೊರೆಯೆಂದರೆ ಪುಟ್ಟದಾದ ಒಂದು ಗ್ರಂಥಾಲಯ. 

9. ಆಟಗಳು :
ಮಕ್ಕಳಿಗೆ ಸ್ವಾಭಾವಿಕವಾಗಿ ಆಟಗಳೆಂದರೆ ಇಷ್ಟ. ಚೆನ್ನೆಮಣೆ ಆಟ, ಬುಗುರಿ ಆಟ, ಗೋಲಿ ಆಟ, ಚಿನ್ನಿದಾಂಡು, ಲಗೋರಿ,ಟೊಂಕ, ಹಿಡಿಯುವ ಆಟ - ಹೀಗೆ ಎಷ್ಟೊಂದು ಆಟಗಳಿವೆ ನಮ್ಮಲ್ಲಿ ಅವು ದೇಹಕ್ಕೆ ವ್ಯಾಯಾಮ ಕೊಡುತ್ತವೆ. ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತವೆ. ಶಾಲೆಯ ಕೊಠಡಿಯಲ್ಲಿ ಮಕ್ಕಳ ನಡುವೆ ಬೆಳೆಯದಂತಹ ಮೈತ್ರಿ, ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ, ಸಹಕಾರ ಮೊದಲಾದ ಮೌಲ್ಯಗಳು ಆಟದ ಬಯಲಲ್ಲಿ ಬೆಳೆಯುತ್ತವೆ. ಪಾಲಕರೇ, ಶಿಕ್ಷಕರೇ ದಯವಿಟ್ಟು ನಿಮ್ಮ ಮಕ್ಕಳಿಗೆ ಬೇರೆ ಬೇರೆ ಆಟಗಳನ್ನು ಕಲಿಸಿ, ಆಟವಾಡಿಸಿ, ಆಟವಾಡಲು ಬಿಡಿ. ಸಾಧ್ಯವಿದ್ದರೆ ಆಟದ ಬಯಲಲ್ಲಿ ನೀವೂ ಇದ್ದು ಮೌಲ್ಯಪ್ರಜ್ಞೆಯನ್ನು ಪ್ರೇರೇಪಿಸಿ. 

10. ಸಹಕಾರಾತ್ಮಕ ಸ್ಪರ್ಧಾ ಮನೋಭಾವ :
ನಾವಿಂದು ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಈ ಮಾತು ಮಾಮೂಲಿ. 99 ಅಂಕ ಪಡೆದವನು ಸೋಲುತ್ತಾನೆ. ಆದರೆ 98 ಅಂಕ ಪಡೆದವನ ಇರುವಿಕೆಯಿಂದಾಗಿಯೇ 99 ಪಡೆದವನಿಗೆ ಮಹತ್ವ. ಅಂದರೆ 98 ಅಂಕ ಗಳಿಸಿದವನ ಇರುವಿಕೆಯು 99 ರವನಿಗೆ ಪರೋಕ್ಷವಾಗಿ ಸಹಕಾರ ಕೊಟ್ಟಿದೆ. ಅಂದ ಮೇಲೆ ಮಕ್ಕಳು ಪರಸ್ಪರ ಪ್ರತ್ಯಕ್ಷವಾಗಿ ಸಹಕಾರ ಕೊಡುವಂತೆ ಯಾಕೆ ಸಲಹೆ ನೀಡಬಾರದು? ಅದಕ್ಕೆ ನಾವು ಯಶಸ್ಸನ್ನು ಅಳೆಯುವ ಮಾನದಂಡ ಬೇರೆಯೇ ಇರಬೇಕಾಗುತ್ತದೆ. ನಮ್ಮ ಮಗುವಿನ ಯಶಸ್ಸನ್ನು ಹಣ ಮಾಡುವುದರಲ್ಲೊಂದರಲ್ಲೇ ಕಾಣದೆ ಎಲ್ಲ ಅರ್ಥಗಳಲ್ಲೂ ಅದರ ಯಶಸ್ಸು ನಮ್ಮ ಹಾರೈಕೆಯಾಗಬೇಕು. ಯಶಸ್ಸಿನ ಅಳತೆಯ ಮಾನದಂಡ ಸರ್ವಾಂಗೀಣ ನೆಲೆಯಿಂದ ಬಂದಿರಬೇಕು. ಮಗುವಿಗೆ ನಾಲ್ಕೇಟು ಬಾರಿಸಿ, ಪಕ್ಕದಲ್ಲೇ ಕುಳಿತು ಓದಿಸಿ, ನಾಲ್ಕೈದು ಟ್ಯೂಷನ್ ಕ್ಲಾಸಿಗೆ ಸೇರಿಸಿ ಮತ್ತೊಂದು ಮಗುವಿಗಿಂತ ನಾಲ್ಕು ಮಾರ್ಕ್ಸ್ ಜಾಸ್ತಿ ತೆಗೆಸಲು ಖಂಡಿತಾ ಸಾಧ್ಯವಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಮಗುವಿನ ಮೇಲೆ ಆಗುವ ನೇತ್ಯಾತ್ಮಕ ಮೌಲ್ಯ ಪ್ರಚೋದನೆ ಇದೆಯಲ್ಲ ಅದು ಈ ಮಗುವನ್ನು ಮತ್ತೊಂದು ಮಗುವಿಗಿಂತ 40 ಮಾರ್ಕ್ಸ್ ಗಳಷ್ಟು ಕೆಳಗಿಳಿಸಿಬಿಡುತ್ತದೆ. ಮಗು ಸ್ಪರ್ಧೆಸಬೇಕಾದ್ದು ಮತ್ತೊಂದು ಮಗುವಿಗೆ ಸಹಕಾರ ಕೊಡುವುದರಲ್ಲಿ. ಈ ಸ್ಪರ್ಧೆ ನಮ್ಮ ಮಗುವನ್ನು ಮಾತ್ರ ಮೇಲಕ್ಕೆತ್ತುವುದಲ್ಲ, ಇಡೀ ಒಂದು ಸಮುದಾಯವನ್ನೇ ಮೇಲಕ್ಕೆತ್ತುತ್ತದೆ. ನಿಜ, ಸದ್ಯದ ಶೈಕ್ಷಣಿಕ ಪರಿಸರದಲ್ಲಿ ಇಂಥ ಮನೋಭಾವ ತುಂಬಾ ಕಷ್ಟ. ಆದರೆ ಮಕ್ಕಳ ನಡುವೆ ಅಂತರ ಹೆಚ್ಚಿಸಿ ನಮ್ಮ ಮಕ್ಕಳನ್ನು ಒಂಟಿಯಾಗಿಸುತ್ತಾ ಹೋದರೆ ಮೌಲ್ಯಪ್ರಜ್ಞೆ ರೂಢಿಯಾಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತು ನಮ್ಮ ಮಕ್ಕಳು ನಿಜವಾಗಿಯೂ ಮೌಲ್ಯವಂತರಾಗಬೇಕೆಂದು ನಾವು ಭಾವಿಸುವುದಾದರೆ ಈ ಪ್ರಯತ್ನಕ್ಕೆ ತೊಡಗಬೇಕಾಗಿದೆ. 

11. ಕಲಾತ್ಮಕ ಪ್ರಜ್ಞೆ :
ಇತ್ತೀಚಿನ ಶೈಕ್ಷಣಿಕ ಸನ್ನಿವೇಶದಲ್ಲಿ ಬೆಳೆಯುತ್ತಿರುವ ಅತ್ಯಂತ ಅನಾರೋಗ್ಯಕಾರಿ ಸಂಗತಿಯೆಂದರೆ ವಿಷಯಾಧಾರಿತ ಶಿಕ್ಷಕರ ಗುಂಪುಗಳು ಮತ್ತು ಪರಸ್ಪರ ವಿಷಯಾಧಾರಿತ ಮೇಲಾಟಗಳು. ಸೂಕ್ಷ್ಮವಾಗಿ ಗಮನಿಸಿ, ನಮ್ಮ ಶಾಲೆಗಳಲ್ಲಿ ವಿಜ್ಞಾನ, ಗಣಿತ,ಶಿಕ್ಷಕರದು ಒಂದು ಗುಂಪು. ಸಮಾಜ ವಿಜ್ಞಾನ, ಕನ್ನಡ, ಹಿಂದಿ ಮತ್ತಿತರೇ ಭಾಷಾ ಶಿಕ್ಷಕರದು ಇನ್ನೊಂದು ಗುಂಪು. ಇಂಗ್ಲಿಷ್ ಶಿಕ್ಷಕರುಗಳದು ಪ್ರತ್ಯೇಕವಾದ ಮತ್ತೊಂದು ಗುಂಪು. ಕ್ರಾಫ್ಟ್, ಲಲಿತಕಲೆ, ದೈಹಿಕ ಶಿಕ್ಷಕರದು ಇನ್ನೊಂದು ಗುಂಪು. ಈ ಗುಂಪುಗಳ ನಡುವೆ ಮೇಲು-ಕೀಳು ಅಂತಲೂ ಇದೆ! ಗಣಿತ ಮತ್ತು ವಿಜ್ಞಾನ ಶಿಕ್ಷರುಗಳದು ಪ್ರಥಮ ದರ್ಜೆ ಅಂತಸ್ತು (ಅದರಲ್ಲೂ ಗಣಿತದವರು ಅತಿ ಹೆಚ್ಚು ಗೌರವಾರ್ಹರು! ವಿಜ್ಞಾನದವರು ಕೊಂಚ ಕಡಿಮೆ ಗೌರವಕ್ಕೆ ಪಾತ್ರರು!). ಇಂಗ್ಲಿಷ್ ಶಿಕ್ಷಕರದು ಎರಡನೆಯ ದರ್ಜೆ ಹಿಂದಿ-ಸಮಾಜ-ಕನ್ನಡದವರದು ಮೂರನೆಯ ಹಾಗೂ ಕ್ರಾಫ್ಟ್,  ಚಿತ್ರಕಲೆ, ದೈಹಿಕ ಶಿಕ್ಷಕರದು ನಾಲ್ಕನೇ ದರ್ಜೆ! ಇವರ ನಡುವೆ ತಮ್ಮತಮ್ಮ ವಿಷಯಗಳ ಆಧಾರದಲ್ಲಿ ಜಗಳ. ವಿದ್ಯಾರ್ಥಿಗಳ ಮೇಲೆ ಆ ಜಗಳದ ಪರಿಣಾಮ ಇತ್ಯಾದಿ. ಆದರೆ ಎಲ್ಲವೂ ಮಹತ್ವಪೂರ್ಣವೇ ಎಂಬ ತಿಳಿವಳಿಕೆಯ ತೀವ್ರ ಅಭಾವ. ಈ ಎಲ್ಲಗಳ ನಡುವೆ ಧುತ್ತೆಂದು ಪ್ರತ್ಯಕ್ಷನಾಗುವ ಕಂಪ್ಯೂಟರ್ ಶಿಕ್ಷಕ ತಾನು ಎಲ್ಲರಿಗಿಂತಲೂ ಮೇಲೆ ಎಂದುಬಿಡುತ್ತಾನೆ. ಆಮೇಲೆ ಪರಸ್ಪರ ಅಂಡರ್ಸ್ಟ್ಯಾಂಡಿಂಗ್ ಬೆಳೆದು ಆತ ವಿಜ್ಞಾನ-ಗಣಿತ ಶಿಕ್ಷಕರ ಗುಂಪಿಗೆ ಸೇರಿಕೊಳ್ಳುತ್ತಾನೆ.

ಆದರೆ ವಾಸ್ತವವಾಗಿ ಇಲ್ಲಿ ಮೇಲು-ಕೀಳುಗಳಿಲ್ಲ.ವಿಜ್ಞಾನ-ಗಣಿತ- ಕಂಪ್ಯೂಟರ್ಗಳು ಮೂಲಭೂತವಾಗಿ ಮಗುವಿನ ಬುದ್ಧಿವಿಕಾಸಕ್ಕೆ ಸಂಬಂಧಿಸಿದವು. ತಾರ್ಕಿಕ ಚಿಂತನೆ, ಪ್ರಮಾಣೀಕರಣದ ಸೂತ್ರ, ವಿಶ್ಲೇಷಣೆ, ಪ್ರಯೋಗ ಪರತೆಗಳು ಅವುಗಳ ನೆಲೆಗಳು. ಅವು ಮಗುವಿನ ಬಹಿರ್ಮುಖಿ ವಿಕಾಸವನ್ನು ಸಾಧಿಸುವ ಬಹಿರಂಗದ ಪ್ರಪಂಚಕ್ಕೆ ಸಂಬಂಧಿಸಿದವು. ಇವಿಲ್ಲದೆ ಮನುಷ್ಯನ ಬದುಕು ಸರಾಗವಾಗುವುದಿಲ್ಲ. ಹಾಗಂತ ಮೌಲ್ಯಪ್ರಜ್ಞೆಯ ವಿಚಾರಕ್ಕೆ ಬಂದಾಗ ಅದನ್ನೆಲ್ಲ ಗಣಿತ-ವಿಜ್ಞಾನಗಳ ಮೂಲಕವೇ ಸಾಧಿಸಲು ಬರುವುದಿಲ್ಲ. ಒಬ್ಬ ಅತ್ಯಂತ ನುರಿತ ಗಣಿತ/ವಿಜ್ಞಾನ ಶಿಕ್ಷಕ ಮೌಲ್ಯಪ್ರಜ್ಞೆಗೆ ಪೂರಕವಾಗಿ ತನ್ನ ಪಠ್ಯವನ್ನು ವಿನ್ಯಾಸಗೊಳಿಸಬಲ್ಲ. ಆದರೆ ಆತ ಮೌಲ್ಯಗಳ ಕಡೆಗೆ ಅತಿಯಾಗಿ ಫೋಕಸ್ ಕೊಡುತ್ತಾ ಹೋದರೆ ಗಣಿತ/ವಿಜ್ಞಾನಗಳ ಮುಖ್ಯ ಉದ್ದೇಶದ ಸಾಧನೆ ಆಗುವುದಿಲ್ಲ.ಲಲಿತಕಲೆ, ಸಮಾಜ ವಿಜ್ಞಾನಗಳೇ ಮೊದಲಾದ ಮಾನವಿಕಗಳು ಮತ್ತು ಭಾಷಿಕಗಳು ಗಣಿತ/ವಿಜ್ಞಾನಗಳಷ್ಟು ತೀವ್ರವಾಗಿ ಬುದ್ಧಿವಿಕಾಸಕ್ಕೆ, ಪ್ರಯೋಗಪರತೆಗೆ, ಬಹಿರ್ಮುಖಿ ಬೆಳವಣಿಗೆಗೆ ನೆರವಾಗುವುದಿಲ್ಲ. ಅವು ಅಂತರ್ಮಿಖಿ ವಿಕಾಸಕ್ಕೆ, ಭಾವವಿಸ್ತಾರಕ್ಕೆ ತಾರ್ಕಿತೀತ ನೆಲೆಯ ಗ್ರಹಿಕೆಗೆ, ವಿಮರ್ಶೆಗೆ, ಮೌಲ್ಯಪ್ರಜ್ಞೆಗೆ, ಅಂತರಂಗದ  ಪ್ರಪಂಚಕ್ಕೆ ಸಂಬಂಧಿಸಿದ ಸಂಗತಿಗಳಿಗೆ ಒತ್ತು ಕೊಡುತ್ತವೆ. ಇವೆಲ್ಲ ಇಲ್ಲದೆಯೂ ಮನುಷ್ಯನ ಬದುಕು ಸಹನೀಯವಾಗುವುದಿಲ್ಲ.

ಕ್ರಾಫ್ಟ್, ಚಿತ್ರಕಲೆ ಮತ್ತು ದೈಹಿಕ ಶಿಕ್ಷಣಗಳು ಶರೀರಕ್ಕೆ ಸಂಬಂಧಿಸಿದ ನೆಲೆಗಳನ್ನು ಹೊಂದಿವೆ. ಚಿತ್ರಕಲೆ, ಕ್ರಾಫ್ಟ್ ಕೌಶಲವನ್ನು ಪ್ರಚೋದಿಸುವ ಕೆಲಸ ಮಾಡಿದರೆ ದೈಹಿಕ ಶಿಕ್ಷಣವು ಇತರೆಲ್ಲ ವಿಷಯಗಳನ್ನು ಸ್ವೀಕರಿಸಲು ಮಗುವಿನ ಶರೀರವನ್ನು ಸನ್ನದ್ಧಗೊಳಿಸುವ ಉದ್ದೇಶ ಹೊಂದಿದೆ. ಈ ನೆಲೆಗಳಿಲ್ಲದೆಯೂ ಬದುಕು ಸರಾಗವಾಗಲಾರದು. ಅಂದ ಮೇಲೆ ವಿಷಯ ಆಧಾರಿತ ಕಿತ್ತಾಟಗಳಿಗೆ ಯಾವ ಅರ್ಥವೂ ಇಲ್ಲ. ನಿಜ ಹೇಳಬೇಕೆಂದರೆ ಸಮಾಜ ವಿಜ್ಞಾನದ ಶಿಕ್ಷಕರಿಗೆ ಸಮಾಜ ವಿಜ್ಞಾನವನ್ನು ವೈಜ್ಞಾನಿಕ ರೀತಿಯಲ್ಲಿ ಪರಿಚಯಿಸಲು ಸಾಧ್ಯವಾಗಬೇಕು. 

ವಿಜ್ಞಾನ ಶಿಕ್ಷಕರಿಗೆ ಕಲಾತ್ಮಕ ರೀತಿಯಲ್ಲಿ ವಿಜ್ಞಾನವನ್ನು ಪರಿಚಯಿಸಲು ಸಾಧ್ಯವಾಗಬೇಕು. ಮಕ್ಕಳಿಗೆ ಮೌಲ್ಯವನ್ನು ರೂಢಿಗೊಳಿಸಲು ಸಹಾಯ ಮಾಡುವ ವಿಚಾರಕ್ಕೆ ಬಂದಾಗ ಎಲ್ಲ ವಿಷಯಗಳ ಶಿಕ್ಷಕರೂ ಕಲಾತ್ಮಕ ಪ್ರಜ್ಞೆಗೆ ಪ್ರೇರಣೆ ಕೊಡಬೇಕಾಗುತ್ತದೆ. ವಿಶ್ವದ ಮೊದಲ ಅಣ್ವಸ್ತ್ರ ಸಿಡಿದಾಗ ಅಲ್ಬರ್ಟ್ ಐನ್ ಸ್ಟೀನ್ ತಾವು ವಿಜ್ಞಾನಿಯಾಗುವುದಕ್ಕಿಂತ ತಮ್ಮ ತಂದೆಯಂತೆ ಗಡಿಯಾರ ರಿಪೇರಿಯವನಾಗಿದ್ದರೆ ಚೆನ್ನಾಗಿತ್ತು ಎಂದಿದ್ದರು. ಅದಕ್ಕೆ ಕಾರಣ ಕಲೆಯ ಬಗ್ಗೆ ಅವರಿಗಿದ್ದ ಅನನ್ಯ ಪ್ರೀತಿ ಮತ್ತು ಆರಾಧನಾ ಮನೋಧರ್ಮ. ಅದು ರೂಪಿಸಿದ ಮೌಲ್ಯಪ್ರಜ್ಞೆ ಅವರಿಂದ ಇಂತಹ ಮಾತುಗಳನ್ನಾಡಿಸಿತು. ನಮಗೆ ಭಾಭಾರಂತಹ, ಸಾರಾಭಾಯಿಯಂತಹ, ರಾಜಾರಾಮಣ್ಣರಂತಹ,ವಿಜ್ಞಾನಿಗಳು ಬೇಕು. ಅಂತಹವರು ಸಿಗಬೇಕಾದರೆ ನಮ್ಮ ಮಕ್ಕಳಲ್ಲಿ ಕಲಾತ್ಮಕ ಹೃದಯವಂತಿಕೆಯನ್ನು ಬೆಳೆಸಬೇಕು. ಅಲ್ಲಿ ಮೌಲ್ಯಪ್ರಜ್ಞೆ ಸದಾ ಜಾಗೃತವಾಗಿರುತ್ತದೆ.

logoblog

Thanks for reading ಹೇಗೆ ರೂಢಿಸಿಕೊಂಡೇವು ಮೌಲ್ಯ

Previous
« Prev Post

No comments:

Post a comment