Goslink

Goslink is providing you latest news, articles, reviews.

Wednesday, 23 December 2020

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ

  Govt Orders Link       Wednesday, 23 December 2020

                      


   
  

   ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ

                                                                                                                                -ಈ. ನಂಜಪ್ಪ

 

 ಪೀಠಿಕೆ: ಒಂದು ಕಾಲದಲ್ಲಿ ಪುರುಷ ಪ್ರಧಾನವಾಗಿದ್ದ ಸಾರ್ವಜನಿಕ ಸೇವಾಕ್ಷೇತ್ರ ಇಂದು ಗಣನೀಯವಾಗಿ ಬದಲಾವಣೆ ಹೊಂದಿದೆ. ಇಂದು ಮಹಿಳೆ ಕೇವಲ ಗೃಹಲಕ್ಷ್ಮಿಯಾಗಿ ಮನೆಯ ನಾಲ್ಕು ಗೋಡೆಗಳ ನಡುವೆ ಇರುವ ಪರಿಸ್ಥಿತಿ ಇಲ್ಲ. ಪುರುಷರು ನಿರ್ವಹಿಸುವ ಬಹುತೇಕ ಎಲ್ಲ ರೀತಿಯ ಕಾರ್ಯಕ್ಷೇತ್ರಗಳಲ್ಲಿ ಇಂದು ಪುರುಷರಿಗೆ ಸರಿಸಮವಾಗಿ ಮಹಿಳೆಯರೂ ಗಣನೀಯ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದನ್ನು ನಾವು ಕಾಣುತ್ತೇವೆ. ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯಸೇವೆಯಲ್ಲಿ ಮಹಿಳಾ ನೌಕರರ ಸಂಖ್ಯೆ ಶೇಕಡಾ 50 ಕ್ಕಿಂತ ಹೆಚ್ಚಾಗಿದೆ. 2007-08 ರ ಪ್ರಕಟಿತ ಮಾಹಿತಿಯಂತೆ ರಾಜ್ಯದ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 350266 ಶಿಕ್ಷಕರ ಪೈಕಿ ಮಹಿಳಾ ಶಿಕ್ಷಕರ ಸಂಖ್ಯೆ 187555 (ಶೇಕಡ 53.50). ಅದೇ ರೀತಿ ನಮ್ಮ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 101.45 ಲಕ್ಷ ವಿದ್ಯಾರ್ಥಿಗಳ ಪೈಕಿ 52.49 ಲಕ್ಷ (ಶೇಕಡ 51.93) ಬಾಲಕಿಯರಿದ್ದಾರೆ.


ಜಾತಿ, ಧರ್ಮ, ಲಿಂಗಭೇದಗಳ ಆಚರಣೆ ಮತ್ತು ಒಂದು ವರ್ಗದವರಿಂದ ಇನ್ನೊಂದು ವರ್ಗದವರಿಗೆ ಉಂಟಾಗುವ ದೌರ್ಜನ್ಯ ಮತ್ತು ಕಿರುಕುಳದಂತಹ ಕೃತ್ಯಗಳು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಹೀಗಿದ್ದರೂ ಪುರುಷ ಸಹೋದ್ಯೋಗಿಗಳಿಂದ ಮಹಿಳಾ ಉದ್ಯೋಗಿಗಳಿಗೆ ಶೋಷಣೆ ಮತ್ತು ಕಿರುಕುಳ ಉಂಟಾದ ಬಗ್ಗೆ ಮತ್ತು ಇತ್ತೀಚಿನ ದಿನಗಳಲ್ಲಿ ನಮ್ಮ ಶಾಲೆಗಳಲ್ಲಿ ಹೆಣ್ಣುಮಕ್ಕಳ ಮೇಲೆ ಶಿಕ್ಷಕರೇ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಗಳ ಬಗ್ಗೆ ಹಲವು ದೂರುಗಳು ಸ್ವೀಕೃತವಾಗುತ್ತಿರುವುದು ಹಾಗೂ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. 


ಯತ್ರನಾರಿ ಪೂಜ್ಯಂತೆ, ರಮಂತೆ ತತ್ರದೇವತಾ - ಎಲ್ಲಿ ಸ್ತ್ರೀಯರನ್ನು ಪೂಜ್ಯಭಾವನೆಯಿಂದ ನೋಡಲಾಗುತ್ತದೆಯೋ ಅಲ್ಲಿ ದೇವತೆಗಳು ನರ್ತಿಸುತ್ತಾರೆ- ಇದು ಒಂದು ಸನಾತನ ಉಕ್ತಿ. 'ನ: ಸ್ತ್ರೀ ಸ್ವಾತಂತ್ರ್ಯ್ರಮರ್ಹತಿ' ಎಂಬ ಮನುವಿನ ವಿವಾದಾತ್ಮಕ ಹೇಳಿಕೆಯ
ಹೊರತಾಗಿಯೂ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ನಮ್ಮ ಸಂವಿಧಾನದಲ್ಲಿಯೂ ಲಿಂಗಬೇಧವಿಲ್ಲದೆ ಸಮಾನತೆಯನ್ನು ಕಲ್ಪಿಸಲಾಗಿದೆ. 


ಇಂತಹ ಸಂಸ್ಕೃತಿ ಮತ್ತು ಪರಂಪರೆ ಹೊಂದಿದ ನಮ್ಮ ಸಮಾಜದಲ್ಲಿ ಮೇಲೆ ವಿವರಿಸಿದ ರೀತಿಯ ಕೃತ್ಯಗಳು ಪ್ರಜ್ಞಾವಂತರಿಗೆ ನಾಚಿಕೆ ತರಿಸುವಂಥವುಗಳಾಗಿವೆ. ಇದು ಸಂವಿಧಾನದತ್ತವಾದ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ವಿಶೇಷವಾಗಿ ಸಮಾಜದ ಸರ್ವರಿಗೂ ಉತ್ತಮ ಶಿಕ್ಷಣ ನೀಡುವುದರ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಹೊತ್ತ ಶಿಕ್ಷಣ ಇಲಾಖೆಯಲ್ಲಿ ಈ ರೀತಿಯ ಕೃತ್ಯಗಳು ನಡೆಯುವುದು ಆತಂಕಕಾರಿಯಾಗಿದೆ. ಇಂತಹ ಕೃತ್ಯಗಳು ಸಂಭವಿಸದಂತೆ ಕ್ರಮ ಕೈಗೊಳ್ಳುವುದು ಇಲಾಖೆಯ ಎಲ್ಲ ಹಂತದ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. 

ಸುಪ್ರೀಂ ಕೋರ್ಟ್ ತೀರ್ಪಿನ ಮುಖ್ಯಾಂಶಗಳು
ಭಾರತದ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಕ್ರಿಮಿನಲ್ ರಿಟ್ ಅರ್ಜಿ 666-70/1992 : ವಿಶಾಖಾ ಮತ್ತು ಇತರರು ತ/ ರಾಜಾಸ್ಥಾನ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ ದಿನಾಂಕ 13-08-1997 ರಂದು ನೀಡಿದ ತೀರ್ಪಿನ ಪ್ರಕಾರ ಮಹಿಳೆಯರಿಗೆ ಇಷ್ಟವಾಗದ ಈ ಕೆಳಕಂಡ ವರ್ತನೆಗಳನ್ನು ಲೈಂಗಿಕ ಕಿರುಕುಳವೆಂದು ಅರ್ಥೈಸಲಾಗಿದೆ.
*ದೇಹ ಸ್ಪರ್ಶಕ್ಕೆ ಪ್ರಯತ್ನ ಮತ್ತು ಪ್ರಣಯ ಚೇಷ್ಟೆಗಳು.
*ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡುವಂತೆ ಒತ್ತಾಯಿಸುವುದು ಅಥವಾ ಕೋರುವುದು.
*ಲೈಂಗಿಕ ಅರ್ಥ ಬರುವ ಮಾತುಗಳನ್ನಾಡುವುದು.
*ಅಶ್ಲೀಲ ಸಾಹಿತ್ಯವನ್ನು ತೋರಿಸುವುದು.
*ಇಷ್ಟವಾಗದ ಯಾವುದೇ ಇತರೆ ದೈಹಿಕ, ಶಾಬ್ದಿಕ ಅಥವಾ ಲೈಂಗಿಕ ಸ್ವರೂಪದ ಹಾವಭಾವ, ಅಂಗಚೇಷ್ಟೆ. 

ವಿವರಣೆ: ಲೈಂಗಿಕ ಕಿರುಕುಳದ ನಡತೆಯಿಂದ ತೊಂದರೆಗೊಳಗಾದ  ಮಹಿಳೆ,  ಸರ್ಕಾರಿ,  ಸಾರ್ವಜನಿಕ ಅಥವಾ ಖಾಸಗಿ ಉದ್ಯಮದಲ್ಲಿರಲಿ ಆಕೆ ಸಂಬಳ, ಪಾರಿಶ್ರಮಿಕ ಧನ ಪಡೆಯುತ್ತಿರಲಿ ಅಥವಾ ಸ್ವಯಂ ಸೇವೆ ಸಲ್ಲಿಸುತ್ತಿರಲಿ, ಆಕೆಯ ಉದ್ಯೋಗ ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ಅಂತಹ ನಡತೆಯಿಂದ ತನ್ನ ಆತ್ಮಗೌರವಕ್ಕೆ ಕುಂದುಂಟಾಗುತ್ತದೆ ಅಥವಾ ತನ್ನ ಆರೋಗ್ಯ ಮತ್ತು ಸುರಕ್ಷತೆಯ ಸಮಸ್ಯೆ ಉದ್ಭವಿಸುತ್ತದೆ ಎಂದು ಆಕೆ ಸಕಾರಣವಾಗಿ ಶಂಕಿಸುವಂಥ ಸನ್ನಿವೇಶಗಳಲ್ಲಿ ಮೇಲಿನ ಯಾವುದೇ ಕೃತ್ಯಗಳನ್ನು ಎಸಗಿದಾಗ ಅವು ಲೈಂಗಿಕ ಕಿರುಕುಳದ ಕೃತ್ಯಗಳಾಗುತ್ತವೆ. ಉದಾಹರಣೆಗೆ, ಆಕೆ ಅಂಥ ನಡತೆಯನ್ನು ಆಕ್ಷೇಪಿಸುವುದರಿಂದ ನೇಮಕ ಅಥವಾ ಬಡ್ತಿ ಒಳಗೊಂಡಂತೆ ಆಕೆಯ ಉದ್ಯೋಗದ ವಿಷಯದಲ್ಲಿ ಅನಾನುಕೂಲ ಉಂಟಾಗುತ್ತದೆ ಎಂದು ನಂಬಲು ಆಕೆಗೆ ಯುಕ್ತ ಕಾರಣಗಳಿರುವಾಗ ಅಥವಾ ಆಕೆ ಆಕ್ಷೇಪ ವ್ಯಕ್ತಪಡಿಸುವುದರಿಂದ ದ್ವೇಷದಿಂದ ಕೂಡಿದ ಕೆಲಸದ ಪರಿಸರ ನಿರ್ಮಾಣವಾಗುವಂತಿದ್ದಾಗ ಇದು ತಾರತಮ್ಯವಾಗುತ್ತದೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ ಆ ಉದ್ದೇಶದಿಂದ ಕೂಡಿದ ನಡತೆಗೆ ತನ್ನ ಒಪ್ಪಿಗೆಯನ್ನು ಸೂಚಿಸದಿದ್ದರೆ ಅಥವಾ ಅದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿದರೆ ಆಕೆ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾದಂಥ ಪರಿಸ್ಥಿತಿ ಎದುರಾಗಬಹುದು.
ಇ) ಖಾಸಗಿ ನಿಯೋಜಕರು ಕೈಗಾರಿಕಾ ನಿಯೋಜನಾ (ಸ್ಥಾಯಿ ಆದೇಶಗಳ) ಅಧಿನಿಯಮ 1946 ಅಡಿಯಲ್ಲಿನ ಸ್ಥಾಯಿ ಅದೇಶಗಳಲ್ಲಿ ಮೇಲೆ ಹೇಳಲಾಗಿರುವ ನಿಷೇಧಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು.
ಈ) ಕೆಲಸ, ಬಿಡುವು, ಆರೋಗ್ಯ ಮತ್ತು ಜನಾರೋಗ್ಯಕ್ಕೆ ಸಂಬಂಧಪಟ್ಟಂತೆ ಯುಕ್ತವಾದ ಕೆಲಸ ಪರಿಸ್ಥಿತಿಗಳನ್ನು ಕಲ್ಪಿಸಬೇಕು. ಅಲ್ಲದೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರನ್ನು ದ್ವೇಷದಿಂದ ಕಾಣುವಂತ ಪರಸರವಿಲ್ಲದಂತೆ ಮತ್ತು ಯಾರೇ ಮಹಿಳಾ ನೌಕರಳು ತನ್ನ ಉದ್ಯೋಗದ ಸಂಬಂಧದಲ್ಲಿ ತಾನು ಅನಾನುಕೂಲಕ್ಕೆ ಒಳಗಾಗಿದ್ದೇನೆ ಎಂದು ಭಾವಿಸುವುದಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು.
3.ಕ್ರಿಮಿನಲ್ ವ್ಯಹಾರಗಳು ಲೈಂಗಿಕ ಕಿರುಕುಳ ನಡತೆ ಭಾರತ ದಂಡ ಸಂಹಿತೆಯ ಮೇರೆಗೆ ಅಥವಾ ಯಾವುದೇ ಇತರ ಕಾನೂನಿನ ಮೇರೆಗೆ ನಿರ್ದಿಷ್ಟ ಅಪರಾಧವಾಗುವಂತಿದ್ದಾಗ ನಿಯೋಜಕನು ಸಮುಚಿತ ಪ್ರಾಧಿಕಾರಕ್ಕೆ ದೂರು ಸಲ್ಲಿಸುವ ಮೂಲಕ ಕಾನೂನಿಗೆ ಅನುಸಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ದಿಷ್ಟವಾಗಿ, ಲೈಂಗಿಕ ಕಿರುಕುಳ ದೂರುಗಳ ಬಗ್ಗೆ ವ್ಯವಹರಿಸುವಾಗ ಲೈಂಗಿಕ ಕಿರುಕುಳಕ್ಕೆ ಒಳಗಾದವರನ್ನು ಅಥವಾ  ಸಾಕ್ಷೀದಾರರನ್ನು ಬಲಿಪಶುಗಳಾಗಿಸದಂತೆ ಅಥವಾ ಅವರ ಬಗ್ಗೆ ಪಕ್ಷಪಾತವಾಗದಂತೆ ನೋಡಿಕೊಳ್ಳಬೆಕು.  ಲೈಂಗಿಕ ಕಿರುಕುಳ ನೀಡುವ ಅಪರಾಧ ಮಾಡಿದವರನ್ನು ಬೇರೆಡೆಗೆ ವರ್ಗ ಮಾಡುವಂತೆ ಅಥವಾ ತಮ್ಮನ್ನು ವರ್ಗಾವಣೆ ಮಾಡುವಂತೆ ಕೋರುವ ಆಯ್ಕೆ ಅವಕಾಶ ಲೈಂಗಿಕ ಕಿರುಕುಳದ ತೊಂದರೆಗೊಳಗಾದವರಿಗೆ ಇರಬೇಕು.
4. ಶಿಸ್ತು ಕ್ರಮ ಅಂತಹ ನಡೆಯು ಸಂಬಂಧಪಟ್ಟ ಸೇವಾ ನಿಯಮಗಳಲ್ಲಿ ಪರಿಭಾಷಿಸುವಂತೆ ಉದ್ಯೋಗದಲ್ಲಿ ದುರ್ನಡತೆಯಾಗುವಂತಿದ್ದಾಗ ಆ ನಿಯಮಗಳ ಅನುಸಾರವಾಗಿ ನಿಯೋಜಕರು ಸೂಕ್ತ ಶಿಸ್ತು ಕ್ರಮವನ್ನು ಪ್ರಾರಂಭಿಸಬೇಕು.
5. ದೂರು ವಿಭಾಗ ಅಂತಹ ನಡತೆಯು ಅಡಿಯಲ್ಲಿ ಅಪರಾಧವಾಗಿರಲಿ ಅಥವಾ ನಿಯಮಗಳ ಉಲ್ಲಂಘನೆಯಾಗಿರಲಿ, ಲೈಂಗಿಕ ಕಿರುಕುಳದ ತೊಂದರೆಗೊಳಗಾದ ವ್ಯಕ್ತಿಯು ನೀಡುವ ದೂರಿನ ಬಗ್ಗೆ ವಿಚಾರಣೆ ನಡೆಸಿ ಪರಿಹಾರವೊದಗಿಸುವುದಕ್ಕಾಗಿ ನಿಯೋಜಕನ ಸಂಸ್ಥೆಯಲ್ಲಿ ಸೂಕ್ತವಾದ ದೂರು ವಿಭಾಗವನ್ನು ಸೃಜಿಸಬೇಕು. ಆ ದೂರು ವಿಭಾಗವು ದೂರುಗಳನ್ನು ನಿಗದಿತ ಅವಧಿಯೊಳಗೆ ವಿಚಾರಣೆ ಮಾಡಿ  ವಿಲೆ  ಮಾಡುವಂತೆ ನೋಡಿಕೊಳ್ಳಬೇಕು.
6. ದೂರು ವಿಚಾರಣಾ ಸಮಿತಿ ಮೇಲೆ ತಿಳಿಸಲಾದ ದೂರು ವಿಭಾಗವು ಅವಶ್ಯವಾದಲ್ಲಿ ಗೋಪ್ಯತೆಯನ್ನು ಕಾಪಾಡಿಕೊಂಡು ಬರುವುದು ಸೇರಿದಂತೆ ವಿಶೇಷ ಸಲಹೆಗಾರರನ್ನು ಒಳಗೊಂಡ ದೂರು ವಿಚಾರಣಾ ಸಮಿತಿಯನ್ನು ರಚಿಸಲು ಅಥವಾ ಇತರೆ ಪೂರಕ  ಸೇವೆಯನ್ನು ಒದಗಿಸಲು ಸಮರ್ಥವಾಗಿರಬೇಕು. 
ದೂರು ವಿಚಾರಣ ಸಮಿತಿಗೆ ಒಬ್ಬ ಮಹಿಳೆಯು ಮುಖ್ಯಸ್ಥರಾಗಿರಬೇಕು ಮತ್ತು ಅದರ ಸದಸ್ಯರ ಪೈಕಿ ಅರ್ಧಕ್ಕಿಂತ ಕಡಿಮೆ ಇಲ್ಲದಷ್ಟು ಮಂದಿ ಮಹಿಳೆಯರಿರಬೆಕು. ಅಲ್ಲದೆ ಉನ್ನತ ಮಟ್ಟಗಳಲ್ಲಿರುವ ಅಧಿಕಾರಿಗಳು ಯಾವುದೇ ಅನುಚಿತ ಒತ್ತಡ ಹೇರುವ ಅಥವಾ ಪ್ರಭಾವ ಬೀರುವ ಸಾಧ್ಯತೆಗಳನ್ನು ತಡೆಯಲು ಅಂತಹ ದೂರು ವಿಚಾರಣೆ ಸಮಿತಿಯಲ್ಲಿ ಲೈಂಗಿಕ ಕಿರುಕುಳದ ವಿಷಯದ ಬಗ್ಗೆ ಸಾಕಷ್ಟು ಅರಿವಿರುವ ಸರ್ಕಾರೇತರ ಸಂಸ್ಥೆ ಇಲ್ಲವೆ ಇತರೆ ಸಂಸ್ಥೆಯನ್ನು ಮೂರನೇ ಪಕ್ಷಕಾರರನ್ನಾಗಿ ಸೇರಿಸಿಕೊಳ್ಳಬೇಕು.


ದೂರು ವಿಚಾರಣ ಸಮಿತಿಯ ದೂರುಗಳ ಬಗ್ಗೆ ಮತ್ತು ಅವುಗಳ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ವಾರ್ಷಿಕ ವರದಿಯನ್ನು ಸಿದ್ಧಪಡಿಸಿ ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ಸಲ್ಲಿಸಬೇಕು.
7. ಕೆಲಸಗಾರರು ಈ ಸಮಸ್ಯೆ ಬಗ್ಗೆ ಸೂಕ್ತ ವೇದಿಕೆಗಳಲ್ಲಿ ಪ್ರಸ್ತಾಪಿಸುವುದು ಕೆಲಸಗಾರರ ಸಭೆಗಳಲ್ಲಿ ಮತ್ತು ಇನ್ನಿತರೆ ಸಮುಚಿತ ವೇದಿಕೆಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ನೀಡಬೇಕು ಮತ್ತು ಈ ವಿಷಯವನ್ನು  ನಿಯೋಜಕ ನೌಕರರ ಸಭೆಗಳಲ್ಲಿ ನಿರ್ಬಿಡೆಯಿಂದ ಚರ್ಚಿಸಬೇಕು.
8. ಅರಿವು ಮೂಡಿಸುವುದು: ಮಾರ್ಗದರ್ಶಿ ಸೂತ್ರಗಳನ್ನು ಸೂಕ್ತ ರೀತಿಯಲ್ಲಿ ಎದ್ದು ಕಾಣುವಂತೆ ಅಧಿಸೂಚಿಸುವ ಮೂಲಕ ಈ ಸಂಬಂಧದಲ್ಲಿ ಮಹಿಳಾ ನೌಕರರ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು.
9. ಮೂರನೇ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಯಾರೇ ಮೂರನೇ ವ್ಯಕ್ತಿ ಅಥವಾ ಹೊರಗಿನ ವ್ಯಕ್ತಿಯ ಕೃತ್ಯ ಅಥವಾ ಲೋಪದಿಂದಾಗಿ ಲೈಂಗಿಕ ಕಿರುಕುಳ ಉಂಟಾದ ಸಂದರ್ಭದಲ್ಲಿ ನಿಯೋಜಕ ಮತ್ತು ಪ್ರಭಾರಿ ವ್ಯಕ್ತಿಯು ತೊಂದರೆಗೊಳಗಾದ ವ್ಯಕ್ತಿಗೆ ಬೆಂಬಲ ನೀಡುವ ಅಂತಹ ಕಿರುಕುಳವನ್ನು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆ ವ್ಯಕ್ತಿಗೆ ನೆರವು ನೀಡಲು ಅವಶ್ಯವಾದ ಮತ್ತು ಯುಕ್ತವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು.
10. ನ್ಯಾಯಾಲಯದ ಆಜ್ಞೆಯಲ್ಲಿ ನಿರೂಪಿಸಲಾಗಿರುವ ಮಾರ್ಗದರ್ಶಕ ಸೂತ್ರಗಳನ್ನು ಖಾಸಗಿ ವಲಯದಲ್ಲಿನ ನಿಯೋಜಕರೂ ಕೂಡ ಪಾಲಿಸುವಂತೆ ಮಾಡಲು ಶಾಸನ ರಚನೆಯೂ ಸೇರಿದಂತೆ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪರಿಗಣಿಸುವಂತೆ ಕೇಂದ್ರ/ರಾಜ್ಯ ಸರ್ಕಾರಗಳನ್ನು ಕೋರಲಾಗಿದೆ.
11 ಈ ಮಾರ್ಗದರ್ಶಕ ಸೂತ್ರಗಳಿಂದ 1993ರ ಮಾನವ ಹಕ್ಕು ಸಂರಕ್ಷಣೆಯ ಅಧಿನಿಯಮದ ಅಡಿಯಲ್ಲಿ ದೊರೆಯುವ ಯಾವುದೇ ಹಕ್ಕುಗಳಿಗೆ ಹಾನಿಯುಂಟಾಗಬಾರದು. ಅದರಂತೆ ಪುರುಷರೊಂದಿಗೆ ಸಮಾನ ಅವಕಾಶವನ್ನು ಹೊಂದಲು  ಉದ್ಯೋಗಸ್ಥ  ಮಹಿಳೆಯರಿಗಿರುವ  ಹಕ್ಕನ್ನು ಸಂರಕ್ಷಿಸುವುದಕ್ಕಾಗಿ ಮತ್ತು ಜಾರಿಗೊಳಿಸುವುದಕ್ಕಾಗಿ ಎಲ್ಲಾ ಸ್ಥಳಗಳಲ್ಲಿ ಮೇಲ್ಕಂಡ ಮಾರ್ಗದರ್ಶಕ ಸೂತ್ರಗಳನ್ನು ಮತ್ತು ನಿಬಂಧನೆಗಳನ್ನು  ಕಟ್ಟು  ನಿಟ್ಟಾಗಿ  ಪಾಲಿಸುವಂತೆ  ನಾವು ನಿರ್ದೇಶಿಸುತ್ತೇವೆ. ಈ ವಿಷಯ ಕುರಿತು ಸೂಕ್ತ ಶಾಸನವನ್ನು ರಚಿಸುವವರೆಗೆ ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಕಾನೂನಿನಲ್ಲಿ ಅವು ಜಾರಿಯಾಗುವಂಥವಾಗಿರುತ್ತವೆ. ಅದರಂತೆ ಈ ರಿಟ್ ಅರ್ಜಿಯನ್ನು ವಿಲೇ ಮಾಡಲಾಗಿದೆ. ನವದೆಹಲಿ, ಆಗಸ್ಟ್ 13, 1997  ಮೇಲ್ಕಂಡಂತೆ ಮಾನ್ಯ ಸರ್ವೋಚ್ಚನ್ಯಾಯಾಲಯದನಿರ್ದೇಶನವನ್ನುಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಆಯುಕ್ತರ ಸಂಖ್ಯೆ ಸ2 (3) ಇತರೆ 5/2200-01 ದಿನಾಂಕ 08-11-2000ರಲ್ಲಿ ವಿವರವಾದ ಸುತ್ತೋಲೆಯನ್ನು ನೀಡಲಾಗಿತ್ತು. ಪುನ: ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕಾರ್ಯದರ್ಶಿರವರ ದಿನಾಂಕ 07-10-2005 ರ ಪತ್ರದ ನಿರ್ದೇಶನದ ಮೇರೆಗೆ ಆಯುಕ್ತರ ಸುತ್ತೋಲೆ ಸಂಖ್ಯೆ ಸಿ2(3) ಇತರೆ 5/2000-01 ದಿನಾಂಕ 12-01-2006 ರ ಅನುಸಾರ ಶಿಕ್ಷಣ ಇಲಾಖೆಯ ವಿವಿಧ ಕಾರ್ಯಾಲಯಗಳ ಹಂತದಲ್ಲಿ ಲೈಂಗಿಕ ಕಿರುಕುಳದ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಹಾಗೂ ತಡೆಗಟ್ಟಲು ಇಲಾಖೆಯ ರಾಜ್ಯಮಟ್ಟದ ಎಲ್ಲ ಕಚೇರಿಗಳು, ವಿಭಾಗೀಯ ಕಚೇರಿಗಳು, ಸಿ.ಟಿ.ಇ. ಗಳು, ಜಿಲ್ಲಾ ಉಪ  ನಿರ್ದೇಶಕರು  (ಆಡಳಿತ),  ಡಯಟ್, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ತಮ್ಮ ಕಚೇರಿ ಮತ್ತು ಅಧಿಕಾರ ವ್ಯಾಪ್ತಿಯಲ್ಲಿ  ಇಂತಹ ದೂರುಗಳನ್ನು ಪರಿಶೀಲಿಸಲು ಸಮಿತಿಗಳನ್ನು ರಚಿಸಲು ಸೂಚಿಸಲಾಗಿದೆ. 
ದೂರು ವಿಚಾರಣಾ ಸಮಿತಿಯ ಅಧ್ಯಕ್ಷರನ್ನಾಗಿ ಓರ್ವ ಮಹಿಳಾ ಅಧಿಕಾರಿ ಅಥವಾ ನೌಕರರನ್ನು ನೇಮಿಸಬೇಕು.
* ಸಮಿತಿಯಲ್ಲಿ ಅರ್ಧಕ್ಕಿಂತ ಕಡಿಮೆ ಇಲ್ಲದಂತೆ ಮಹಿಳೆಯರಿರಬೇಕು.
* ಸಮಿತಿಯಲ್ಲಿ ಎಲ್ಲ ವೃಂದದ ನೌಕರರಿರಬೇಕು. 
* ಸಮಿತಿಯಲ್ಲಿ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ಇರುವುದು ಕಡ್ಡಾಯ. 
ಈ ಸಮಿತಿಯಲ್ಲಿ ಸ್ವೀಕೃತವಾದ ಅರ್ಜಿಗಳು, ನಡೆಸಲಾದ  ಸಭೆಗಳು,  ತೆಗೆದುಕೊಳ್ಳಲಾದ ನಿರ್ಣಯಗಳು ಇತ್ಯಾದಿ ವಿವರಗಳನ್ನೊಳಗೊಂಡ  ವರದಿಯನ್ನು ರಾಜ್ಯ ಮಹಿಳಾ ಆಯೋಗಕ್ಕೆ ಮತ್ತು ಕಚೇರಿ/ಇಲಾಖಾ ಮುಖ್ಯಸ್ಥರಿಗೆ ಮತ್ತು ಆಯಾ ಕ್ಷೇತ್ರದ ಮಾನ್ಯ
ಶಾಸಕರಿಗೆ ಸಲ್ಲಿಸಬೇಕು.
ಸಮಿತಿಯನ್ನು 2 ವರ್ಷಕ್ಕೊಮ್ಮೆ ಪುನಾರಚಿಸತಕ್ಕದ್ದು.
ಈ ಸಮಿತಿಯು ಸಲ್ಲಿಸಿದ ವರದಿ ಅನ್ವಯ ಕಚೇರಿ ಮುಖ್ಯಸ್ಥರು ಕ್ರಮ ಕೈಗೊಂಡು ಅನುಪಾಲನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.
 

 

logoblog

Thanks for reading ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ

Previous
« Prev Post
Oldest
You are reading the latest post

No comments:

Post a comment